ನಾನು... ಮತ್ತೊಂದು ಗಣರಾಜ್ಯ ದಿನ
ಗ್ಯಾಡ್ಜೆಟ್ಟುಗಳ ವಿಡಿಯೋಗೇಮ್ ಗಳ ಪೋಲಿ ಆಟಗಳ ಹೊಳೆಯ ಭ್ರಮಾಲೋಕದಲ್ಲಿ ದಿನನಿತ್ಯವೂ ಮುಳುಗೇಳುತ್ತಿರುವ ಯುವಮಿತ್ರರೆ, ನೌಕರಿ, ಚಾಕರಿ, ಸಂಸಾರ, ಜೀವನ, ಆಸ್ತಿ, ಹಣ,ಆರೋಗ್ಯ ಮುಂತಾದ ಮಹಾಭಾಗ್ಯ ಕೂಪದಲ್ಲಿ ಮುಳುಗಲೂ ಆಗದೆ ತೇಲಲೂ ಆಗದೆ ಸದಾ ಸಾಹಸಮಯ ಜೀವನವನ್ನು ತೂಗಿಸುತ್ತಾ ಯಾವ ಪುರುಷಾರ್ಥಕ್ಕೆಂದು ಯೋಚಿಸಲೂ ಸಮಯವಿಲ್ಲದೇ ಎಲ್ಲವನ್ನೂ ಬಲಿದಾನಗೈದಿರುವ ಸಂಸಾರಿ ಮಿತ್ರರೆ, ಅನಾಥ ಮಕ್ಕಳೆ, ನಿರ್ಭಾಗ್ಯರಾಗಿ ಇನ್ನೂ ಬದುಕಿರುವ ಮುದುಕರೆ, ನಿಮಗೆಲ್ಲರಿಗೂ ನಾನು ಮಾಡುವ ವಂದನೆಗಳು. ಇಂದಿನ ದಿನ ಗಣರಾಜ್ಯದಿನ.. ಅಂದರೆ ನಾನು ಇರುವೆ ಎಂಬ ಭ್ರಮೆ ಹುಟ್ಟಿದ ದಿನ.. ನನಗೆ ಗೊತ್ತು ಎಂದಿನಂತೇ ಈ ವರ್ಷವೂ ಕೆಲವರು ಮಹಾನುಭಾವರು ಬಾವುಟ ಹಾರಿಸಿ, ಸಿಹಿ ಕಾಯಿಲೆ ಹಬ್ಬುತ್ತಾ ತಮ್ಮ ಕೊಳಕು ಬಾಯಿಗಳಿಂದ ನನ್ನನ್ನು ಕೊಂದಾಡಲು ಉತ್ಸುಕರಾಗಿದ್ದಾರೆ. ನೀವೂ ಚಪ್ಪಾಳೆ ತಟ್ಟುವ ಉತ್ಸಾಹದ ಭರದಲ್ಲಿ ಕೈ ತುರಿಸಿಕೊಳ್ಳುತ್ತಿದ್ದೀರಿ. ಇಂತಹಾ ಸಮಯದಲ್ಲಿ ನಿಮಗೆ ನಾನು ನೆನಪು ಮಾಡಿಕೊಡುವ ಒಂದಷ್ಟು ಅಂಶಗಳಿವೆ. 1. ಗಾಂಧಿ: ನಾನು ಹುಟ್ಟುವಾಗಲೇ ಈ ಮನುಷ್ಯನನ್ನೂ ಕೊಂದಿದ್ದರು ಮತ್ತು ಅವನನ್ನು ಕೊಂದ ನಿರ್ದಯಿ ಕೊಲೆಗಡುಕನನ್ನೂ ಕೊಂದಿದ್ದರು. ಹಾಗಾಗಿ ನಾನು ಅವರಿಬ್ಬರನ್ನು ಎಂದಿಗೂ ಬೇಟಿಯಾಗಲು ಸಾಧ್ಯವೇ ಆಗಲಿಲ್ಲ. ಆದರೂ ಅದೇ ತಾನೆ ಅಂಬೆಗಾಲಿಕ್ಕುತ್ತಿದ್ದ ನನಗೆ ಆ ಪುಣ್ಯಾತ್ಮನ ಬಗ್ಗೆ ಹಲವಾರು ಪವಾಡದ ಕತೆಗಳನ್ನು ಚಾಚಪ್ಪ ಹೇಳಿ ನಂಬಿಸಿದ್ದ. ನಾನ...