ನಾನು... ಮತ್ತೊಂದು ಗಣರಾಜ್ಯ ದಿನ

ಗ್ಯಾಡ್ಜೆಟ್ಟುಗಳ ವಿಡಿಯೋಗೇಮ್ ಗಳ ಪೋಲಿ ಆಟಗಳ ಹೊಳೆಯ ಭ್ರಮಾಲೋಕದಲ್ಲಿ ದಿನನಿತ್ಯವೂ ಮುಳುಗೇಳುತ್ತಿರುವ ಯುವಮಿತ್ರರೆ, ನೌಕರಿ, ಚಾಕರಿ, ಸಂಸಾರ, ಜೀವನ, ಆಸ್ತಿ, ಹಣ,ಆರೋಗ್ಯ ಮುಂತಾದ ಮಹಾಭಾಗ್ಯ ಕೂಪದಲ್ಲಿ ಮುಳುಗಲೂ ಆಗದೆ ತೇಲಲೂ ಆಗದೆ ಸದಾ ಸಾಹಸಮಯ ಜೀವನವನ್ನು ತೂಗಿಸುತ್ತಾ ಯಾವ ಪುರುಷಾರ್ಥಕ್ಕೆಂದು ಯೋಚಿಸಲೂ ಸಮಯವಿಲ್ಲದೇ ಎಲ್ಲವನ್ನೂ ಬಲಿದಾನಗೈದಿರುವ ಸಂಸಾರಿ ಮಿತ್ರರೆ, ಅನಾಥ ಮಕ್ಕಳೆ, ನಿರ್ಭಾಗ್ಯರಾಗಿ ಇನ್ನೂ ಬದುಕಿರುವ ಮುದುಕರೆ, ನಿಮಗೆಲ್ಲರಿಗೂ ನಾನು ಮಾಡುವ ವಂದನೆಗಳು.

ಇಂದಿನ ದಿನ ಗಣರಾಜ್ಯದಿನ.. ಅಂದರೆ ನಾನು ಇರುವೆ ಎಂಬ ಭ್ರಮೆ ಹುಟ್ಟಿದ ದಿನ.. ನನಗೆ ಗೊತ್ತು ಎಂದಿನಂತೇ ಈ ವರ್ಷವೂ ಕೆಲವರು ಮಹಾನುಭಾವರು ಬಾವುಟ ಹಾರಿಸಿ, ಸಿಹಿ ಕಾಯಿಲೆ ಹಬ್ಬುತ್ತಾ ತಮ್ಮ ಕೊಳಕು ಬಾಯಿಗಳಿಂದ ನನ್ನನ್ನು ಕೊಂದಾಡಲು ಉತ್ಸುಕರಾಗಿದ್ದಾರೆ. ನೀವೂ ಚಪ್ಪಾಳೆ ತಟ್ಟುವ ಉತ್ಸಾಹದ ಭರದಲ್ಲಿ ಕೈ ತುರಿಸಿಕೊಳ್ಳುತ್ತಿದ್ದೀರಿ.

ಇಂತಹಾ ಸಮಯದಲ್ಲಿ ನಿಮಗೆ ನಾನು ನೆನಪು ಮಾಡಿಕೊಡುವ ಒಂದಷ್ಟು ಅಂಶಗಳಿವೆ.

1. ಗಾಂಧಿ: ನಾನು ಹುಟ್ಟುವಾಗಲೇ ಈ ಮನುಷ್ಯನನ್ನೂ ಕೊಂದಿದ್ದರು ಮತ್ತು ಅವನನ್ನು ಕೊಂದ ನಿರ್ದಯಿ ಕೊಲೆಗಡುಕನನ್ನೂ ಕೊಂದಿದ್ದರು. ಹಾಗಾಗಿ ನಾನು ಅವರಿಬ್ಬರನ್ನು ಎಂದಿಗೂ ಬೇಟಿಯಾಗಲು ಸಾಧ್ಯವೇ ಆಗಲಿಲ್ಲ. ಆದರೂ ಅದೇ ತಾನೆ ಅಂಬೆಗಾಲಿಕ್ಕುತ್ತಿದ್ದ ನನಗೆ ಆ ಪುಣ್ಯಾತ್ಮನ ಬಗ್ಗೆ ಹಲವಾರು ಪವಾಡದ ಕತೆಗಳನ್ನು ಚಾಚಪ್ಪ ಹೇಳಿ ನಂಬಿಸಿದ್ದ. ನಾನೂ ಹೀಗೆ ಇಂತವರ ಬಾಯಿಯಿಂದ ಇಂತಹಾ ರೋಚಕ ಕತೆಗಳನ್ನೇ ಕೇಳುತ್ತಾ ಬೆಳೆದವ. ಅವುಗಳಲ್ಲಿ ಮೈಸೂರ ಗಲ್ಲಿಗಳಲ್ಲಿ ಓಕುಳಿಯಾಡಿದ ಹುಲಿಯಪ್ಪನ ಕತೆ, ಅವರಪ್ಪನ ಕತೆ, ಇಂತವು ಮುಖ್ಯವಾದುವು. ಸದ್ಯಕ್ಕೆ ಈ ಮುದುಕನ ಕತೆ ಇರಲಿ
ಈಗಲೂ ಬಾಯಿಪಾಟವಿದೆ "ಗಾಂಧಿ ಸತ್ಯವನ್ನೇ ಹೇಳುತ್ತಿದ್ದರು, ಅವರೆಂದೂ ಸುಳ್ಳು ಹೇಳಿದವರಲ್ಲ"  ಆಗ ಕೇಳಿದೆ ಚಾಚಪ್ಪನನ್ನು ಈ ಸತ್ಯ ಮತ್ತು ಸುಳ್ಳು ಎಂದರೇನು? ಚಾಚಪ್ಪ ನಕ್ಕ ..ಸುಳ್ಳು ಏನು ಎಂಬುದು ಅರ್ಥವಾಯಿತು . ಟೋಪಿ ತೆಗೆದು ತಲೆ ಕೆರೆದುಕೊಂಡ.. ಸತ್ಯ ಎಂದರೇನು ಅಂತ ಗೊತ್ತಾಯಿತು. ರಾಲ್ಸ್ರಾಯ್ ಕಾರು ನಿಂತಿತು ಸುಂದರಿಯ ಹೆಜ್ಜೆ ಸಪ್ಪಳ  ಚಾಚಪ್ಪನೂ ಬೆನ್ನು ತೋರಿಸಿದ..


ಮುಂದೊಮ್ಮೆ ಒಂದು ಪುಸ್ತಕ ಸಿಕ್ಕಿತು... ಸುಂದರವಾಗಿ ಧೂಳು ಹಿಡಿದ ಪುಸ್ತಕ. ಓಹ್...... ಅದೇ ಗಾಂಧಿ ಬರೆದದ್ದು..."ನನ್ನ ಸತ್ಯಾನ್ವೇಷಣೆಯ ಕತೆ" .... ಓದಿ ಮುಗಿಸಿದೆ... ಅಬ್ಬಬ್ಬಾ ಎಂತಹಾ ಪುಸ್ತಕ... ಎಂತಹ ಅನ್ವೇಷಣೆ... ವಿಜ್ಞಾನಿಗಳ ಅನ್ವೇಷಣೆಗೆ ಬಲಿಪಶುಗಳಿರುತ್ತವೆ.. ಆದರೆ ಅಹಿಂಸಾವಾದಿಯ ಅನ್ವೇಷಣೆಗೆ? ದೇಶವೇ ಬಲಿಯಾಗಬೇಕು ಅಲ್ಲವೆ?..ಅಂತೂ ನಾನು ಹುಟ್ಟುವ ಮೊದಲೇ ನನ್ನ ಚರಮಗ್ರಂಥ ಸಿದ್ಧವಾಗಿತ್ತು. ಭವ್ಯ ಭಾರತದ ದಿವ್ಯಪ್ರಜೆಗಳಿಗಾಗಿ


2. ಗೋಡ್ಸೆ:ಇನ್ನೊಂದು ಪೂರಕ ಪುಸ್ತಕ "ನಾನೇಕೆ ಗಾಂಧಿಯನ್ನು ಹತ್ಯೆ ಮಾಡಿದೆ?" ಇದು ಔಟ್ ಆಫ್ಹ್ ಸಿಲಬಸ್...ಕ್ರೂರಿಗಳು ಓದಬಹುದು ಗುಟ್ಟಾಗಿ ಬಾಗಿಲು ಮುಚ್ಚಿಕೊಂಡು. ಅವನೇ ಮುಟ್ಟಾಳ ಅರೆಹುಚ್ಚ ಮಹಾಕ್ರೂರಿ ನಾಥೂರಾಮ ಗೋಡ್ಸೆ ಬರೆದದ್ದು...ಯಕಶ್ಚಿತ್ ಭಗತ್ ಸಿಂಗನಂತೆ, ಸಾವರ್ಕರರಂತೆ, ಸುಭಾಸರಂತೆ ಸರ್ವನಾಶವಾಗಿ ಹೋದವ.. ಸಾಯುವವನ ಮಾತು ಸತ್ಯ ಅನ್ನುತ್ತಾರೆ ಇದ್ದರೂ ಇರಬಹುದು.... ಆದರೂ ಅದೆಂತಹಾ ಕ್ರೂರ ಆತ್ಮರಕ್ಷಣೆಯನ್ನು ಪ್ರತಿಪಾದಿಸುತ್ತಾನೆಂದರೆ ಈ ದುರಾತ್ಮನ ಕೊನೆಯಾಸೆ ತನ್ನ ಚಿತಾಭಸ್ಮದ ವಿಸರ್ಜನೆ ಸ್ವತಂತ್ರ ಭಾರತದಲ್ಲಿ ಹರಿಯುವ ಹಿಂದೂ ನದಿಯಲ್ಲಾಗಲಿ ಅಂತ...  ತನ್ನ ಚಿತಾಭಸ್ಮಕ್ಕೂ ಶಾಂತಿ ಸಿಗದಂತೆ ಮಾಡಿಕೊಂಡ....



3. ಇನ್ನು ಕೊನೆಯದಾಗಿ ನಾನು: ನನಗೂ ಅರವತ್ತೈದಾಯಿತು... ಕನ್ನಡಿ ನೋಡಿಕೊಂಡಿಲ್ಲವಾಗಿ ನನ್ನ ಲಿಂಗ, ಧರ್ಮ , ಜಾತಿ, ಗೋತ್ರ ತಿಳಿಯದ ನನ್ನನ್ನು ಸೆಕ್ಯ್ಲಲರ್ ಎಂದೇನೋ ಕರೆಯುತ್ತಾರೆ... ನಾನು ಹುಟ್ಟುವ ಮೊದಲೇ ನನ್ನ ಪುರುಷತ್ವವನ್ನೋ ಕನ್ಯತ್ವವನ್ನೋ ನಾಶಮಾಡಿ ನನ್ನನ್ನು ಕೃತಾರ್ಥರನ್ನಾಗಿಸಿದವರ ಭಾಷೆಯಲ್ಲಿ. ಹಲವಾರು ಗಾಂಧಿಗಳ ನಂತರ ಇದೀಗ ಓವೈಸಿ ಗಳಂತಹಾ ಭಾಜಪ ರಾಜಪ ಆಜಪ ಈಜಪ ಮಾಡುವ ಮಾತ್ಮರಂತಹ ಜಗದೇಕ ವೀರರು ಅದೇ ಕೆಲಸವನ್ನು ಮುಂದುವರಿಸಿದ್ದಾರೆ. ಸಾಲಾಗಿ ಠೀವಿಗಳಿವೆ ಅನುದಿನ ನಿಮ್ಮ ಮನೋರಂಜನೆಗಾಗಿ!

ಇಷ್ಟಾಗಿ ನನ್ನ ಕೊನೆಯಾಸೆಯೊಂದಿದೆ... 
ನನ್ನ ಆಯುಷ್ಯ ಮುಗಿಯುವುದರೊಳಗಾಗಿಯಾದರೂ ಒಂದಷ್ಟು ಬಡ ಇಲಿಗಳು ಬೆಕ್ಕಿನ ಕುತ್ತಿಗೆಗೆ ಗಂಟೆ ಕಟ್ಟಲು ಸಿದ್ಧವಾಗುತ್ತವೆಂದು.
ನನ್ನ ಚಿತೆಗೆ ಬೆಂಕಿ ಕೊಡುವ ಮೊದಲಾದರೂ ಕಿಚ್ಚೊಂದು ಹೊತ್ತೀತೆಂದು
ಕೊಟ್ಟ ಕೊನೆಗೆ ಭಗತ ಸಿಂಗನಂತಲ್ಲದಿದ್ದರೂ
ನಿಮ್ಮ ಮನೆಯಲ್ಲಲ್ಲದಿದ್ದರೂ
ನಿಮ್ಮ ಪಕ್ಕದ ಮನೆಯಲ್ಲಾದರೂ
ನನಗೆ ಈ ಭಾಷಣವನ್ನು ಬರೆದುಕೊಟ್ಟ
ಪರಮ ಮುಟ್ಟಾಳ ಅನಾಗರಿಕ ರಣಹೇಡಿಯಂತವನಾದರೂ 
ಹುಟ್ಟಿ ಬರಲೆಂದು

ಕೊನೆಯುಸಿರುಗಳೊಂದಿಗೆ

ಭಾರತ್ ಮಾತಾಕೀ ಜೈ
ಇನ್ಕ್ವಿಲಾಬ್ ಜಿಂದಾಬಾದ್


ನೀವು ಚಪ್ಪಾಳೆ ಹೊಡೆಯಲಾರಿರಿ ಎಂಬುದು ಗೊತ್ತು ಬಿಡಿ.. ಮತ್ತೆ ಬದುಕಿದ್ದರೆ ಮಾತಿಗೆ ಸಿಗುತ್ತೇನೆ


Comments

  1. ಸೂಪರ್ ನೂತನ್.. ತುಂಬಾನೇ ಇಷ್ಟವಾಯ್ತು.

    ನೀವು ಬಿಂಬಿಸಿಹ ಗಣರಾಜ್ಯೋತ್ಸವದ ದಿನದ ನರಳಾಟಗಳು ಅಕ್ಷರ ಸಹ ನಿಜ ಅನ್ನಿಸುತ್ತವೆ.

    ಆದರೂ ಅದರ ಪರಿವು ಯಾರಿಗೂ ಇಲ್ಲ. ಇದ್ದಿರುವ ಕೆಲ ಮಂದಿಯ ಕೈಲಿ ಶಕ್ತಿ ಇಲ್ಲ. ಶಕ್ತಿ ಇದ್ದರೂ ಇಂಥವುಗಳನ್ನು ಬದಲಾಯಿಸಬಲ್ಲ ಪವಾಡಗಳು ನಡೆಯುವುದೇ ಇಲ್ಲ.

    ಮತ್ತೆ ನಾವೆಲ್ಲಾ ಅಂತ ಪವಾಡಗಳ ನಿರೀಕ್ಷೆಯಲ್ಲಿ.. ದೇಶದ ಬಗ್ಗೆ ಚಿಂತಿಸುತ್ತಾ ಚಿಂತಿಸುತ್ತಾ ಸುಮ್ಮನೆ ಕೂರುವುದನ್ನು ನಿಲ್ಲಿಸುವುದೂ ಇಲ್ಲ. ಕಾಯುವಿಕೆ ಕೊನೆಯಾಗುವುದೇ ಇಲ್ಲ.

    ಮತ್ತೂ ಇಂತಹ ನಡವಳಿಕೆಗಳು ಕೂಡ. ಗಣರಾಜ್ಯೋತ್ಸವ ಬದುಕ ಬೇಕಿದೆ. ಅದರ ನಿಜವಾದ ಅರ್ಥವನ್ನು ಕಂಡು ಕೊಂಡು.

    ReplyDelete

Post a Comment

Popular posts from this blog

ಬಾಳಕುದುರು ಮಠದ ಇತಿಹಾಸ

ವರ್ಣಾಶ್ರಮಗಳು ಮತ್ತು ಧರ್ಮ