೧. ಮೊದಲ ಕನಸು
ಮಂಗಳೂರಿನಲ್ಲಿ ಅರೆಹೊಳೆ ಪ್ರತಿಷ್ಟಾನ ದವರು ನಮ್ಮ ೩ಕೆ ಸ್ನೇಹಿತರನ್ನು ಸೇರಿಸಿಕೊಂಡು ಏರ್ಪಡಿಸಿದ್ದ ಅಂತರ್ಜಾಲ ಕವಿಗಳ ಸಮಾವೇಶದಲ್ಲಿ ಕವನವಾಚನ ಮಾಡಿ ಬೀಗುತ್ತಿದ್ದ ನನಗೆ ಪುಟ್ಟ ಹುಡುಗಿಯಂತೆ ಕಾಣುವ ನವಕವಯಿತ್ರಿಯೊಬ್ಬಳು ಒಂದು ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟು ವಿಮರ್ಶೆ ಬರೆಯಲು ಸೂಚಿಸಿದಾಗ ನಾವೂ ಬೀಗಿ ಹೋಗೊದ್ದೆವು. ’ ಮೊದಲ ಕನಸು ’ ಎಂಬ ಚೊಚ್ಚಲ ಕವನ ಸಂಕಲನದ ಕವನಗಳನ್ನು ಸಾಕಷ್ಟು ಹಿಂಜಿ ಒಂದು ಮುನ್ನುಡಿಯನ್ನು ಅದಾಗಲೇ ಹಿರಿಯರಾದ ಡಾ.ವಸಂತ ಕುಮಾರ ಪೆರ್ಲರು ನಮ್ಮ ಮುಂದಿಟ್ಟಿದ್ದರಿಂದ ನಮ್ಮ ಪಾಲಿಗಿದ್ದುದು ಕವನಗಳು ಮತ್ತು ಕಾವ್ಯಾನುಭವ ಮಾತ್ರ. ಕೊಟ್ಟ ಮಾತಿಗೆ ತಪ್ಪಬಾರದೆಂದು ಹಮ್ಮಿನಿಂದಲೇ ವಿಮರ್ಷೆ ಬರೆಯಲು ಪೆನ್ನು ಪುಸ್ತಕದೊಂದಿಗೆ ಕವಿತೆಗಳನ್ನು ಹರಡಿಕೊಂಡು ಕುಳಿತೆ. ನನ್ನಿಂದ ಬರೆಯಲಾಗಿದ್ದು ಇಷ್ಟೆ: ಮೊದಲ ಕನಸಿನ ಮೊದಲ ಕವನ “ ವಿಪರ್ಯಾಸ ” ದಿಂದಲೇ ಶುರುವಾಗುತ್ತದೆ. ಅದರ ಬಗ್ಗೆ ನಾನು ಬರೆಯಲಾಗಿದ್ದು ಹೀಗೆ: ದಿನ ದಿನವೂ ನದಿಯಂತೆ ಝರಿದು ಹರಿದು ಮೊರೆದು ನೆನಪಿನಲೆಗಳ ಸಾಗರ ಸೇರುವಾಗ ಮೊದಲ ಕನಸೂ ಉಪ್ಪುಪ್ಪು! ಚಾಂಚಲ್ಯ ಎಂಬುದು ಎರಡನೇ ಕವನ: ಹೂವು ಗಿಡದಲ್ಲೇ ನಗುತ್ತಿದ್ದರೆ ಚಂದ್ರ ಕೈಗೆ ಸಿಗದಿದ್ದರೂ ಕಣ್ಣಿಗೆ ತುಂಬಿಕೊಂಡ ಬೆಳದಂಗಳಲ್ಲಿ ಹೊಸ ಆಸೆಗಳು ಮೊಳೆಯುತ್ತವೆ ರಹಸ್ಯ ಎಂಬೊಂದು ಕವನದ ಸ್ಪೂರ್ತಿಯಿಂದ ಹೀಗೆ ಬರೆದೆ: ತಪಸ್ಸಿಗೊಲಿದ ಒಂಬತ್ತರ ಹಿಂದೆ ...