೧. ಮೊದಲ ಕನಸು
ಮಂಗಳೂರಿನಲ್ಲಿ ಅರೆಹೊಳೆ ಪ್ರತಿಷ್ಟಾನದವರು ನಮ್ಮ
೩ಕೆ ಸ್ನೇಹಿತರನ್ನು ಸೇರಿಸಿಕೊಂಡು ಏರ್ಪಡಿಸಿದ್ದ ಅಂತರ್ಜಾಲ ಕವಿಗಳ ಸಮಾವೇಶದಲ್ಲಿ ಕವನವಾಚನ ಮಾಡಿ ಬೀಗುತ್ತಿದ್ದ ನನಗೆ ಪುಟ್ಟ
ಹುಡುಗಿಯಂತೆ ಕಾಣುವ ನವಕವಯಿತ್ರಿಯೊಬ್ಬಳು ಒಂದು ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟು ವಿಮರ್ಶೆ
ಬರೆಯಲು ಸೂಚಿಸಿದಾಗ ನಾವೂ ಬೀಗಿ ಹೋಗೊದ್ದೆವು.
’ಮೊದಲ ಕನಸು’
ಎಂಬ ಚೊಚ್ಚಲ ಕವನ ಸಂಕಲನದ ಕವನಗಳನ್ನು
ಸಾಕಷ್ಟು ಹಿಂಜಿ ಒಂದು ಮುನ್ನುಡಿಯನ್ನು ಅದಾಗಲೇ ಹಿರಿಯರಾದ ಡಾ.ವಸಂತ ಕುಮಾರ ಪೆರ್ಲರು ನಮ್ಮ
ಮುಂದಿಟ್ಟಿದ್ದರಿಂದ ನಮ್ಮ ಪಾಲಿಗಿದ್ದುದು ಕವನಗಳು ಮತ್ತು ಕಾವ್ಯಾನುಭವ ಮಾತ್ರ.
ಕೊಟ್ಟ ಮಾತಿಗೆ
ತಪ್ಪಬಾರದೆಂದು ಹಮ್ಮಿನಿಂದಲೇ ವಿಮರ್ಷೆ ಬರೆಯಲು ಪೆನ್ನು ಪುಸ್ತಕದೊಂದಿಗೆ ಕವಿತೆಗಳನ್ನು
ಹರಡಿಕೊಂಡು ಕುಳಿತೆ. ನನ್ನಿಂದ ಬರೆಯಲಾಗಿದ್ದು ಇಷ್ಟೆ:
ಮೊದಲ ಕನಸಿನ ಮೊದಲ ಕವನ “ವಿಪರ್ಯಾಸ”ದಿಂದಲೇ ಶುರುವಾಗುತ್ತದೆ. ಅದರ ಬಗ್ಗೆ ನಾನು
ಬರೆಯಲಾಗಿದ್ದು ಹೀಗೆ:
ದಿನ ದಿನವೂ ನದಿಯಂತೆ
ಝರಿದು ಹರಿದು ಮೊರೆದು
ನೆನಪಿನಲೆಗಳ ಸಾಗರ
ಸೇರುವಾಗ
ಮೊದಲ ಕನಸೂ ಉಪ್ಪುಪ್ಪು!
ಚಾಂಚಲ್ಯ ಎಂಬುದು ಎರಡನೇ
ಕವನ:
ಹೂವು ಗಿಡದಲ್ಲೇ
ನಗುತ್ತಿದ್ದರೆ
ಚಂದ್ರ ಕೈಗೆ
ಸಿಗದಿದ್ದರೂ
ಕಣ್ಣಿಗೆ ತುಂಬಿಕೊಂಡ
ಬೆಳದಂಗಳಲ್ಲಿ
ಹೊಸ ಆಸೆಗಳು
ಮೊಳೆಯುತ್ತವೆ
ರಹಸ್ಯ ಎಂಬೊಂದು ಕವನದ
ಸ್ಪೂರ್ತಿಯಿಂದ ಹೀಗೆ ಬರೆದೆ:
ತಪಸ್ಸಿಗೊಲಿದ ಒಂಬತ್ತರ
ಹಿಂದೆ
ನನ್ನಲ್ಲಿರುವ
ಶೂನ್ಯಭಂಡಾರವ ಪೋಣಿಸದ
ಅತೀದೊಡ್ಡ ಅಂಕೆಯ
ಚಾಪಲ್ಯದಿಂದ
ಕಾಲಹರಣ ಮಾತ್ರ ಮಾಡಿದೆ!
ಬದುಕು ಎಂಬ ಕವನ ಓದಿದ
ಅನುಭವ ಹೀಗೆ ದಾಖಲಿಸಿದೆ:
ಬರೆದರೂ ಓದಲಾಗದ ಸುಂದರ
ಪ್ರಶ್ನೆಗೆ ಉತ್ತರ
ಹುಡುಕಿದ ಜಡಭರತ
ಮುದುಕಿಯಾದ ಪ್ರಶ್ನೆಯ
ಗುರುತಿಸದೇ
ಸಿಕ್ಕ ಉತ್ತರವನ್ನೂ
ಕಳಕೊಂಡುಬಿಟ್ಟ
ಜ್ವಲಂತ- ಎಂದೊಂದು
ಕಿರುಗವನಕ್ಕೆ :
ಅಮವಾಸ್ಯೆಯ ರಾತ್ರಿ
ತೆವಳುವಾಗ
ನಕ್ಷತ್ರಗಳ ಬೆಳಕೇ ಅಮೃತ
ಮತ್ತು ಚಂದ್ರನಿಲ್ಲದ
ಬಾನಿನ ವಿರಹಗೀತ
ನಮ್ಮ ಕವಯತ್ರಿ ಕೃಷ್ಣ
ಸುಂದರಿ; ಕೃಷ್ಣ ಭಕ್ತೆ ಕೂಡಾ! ’ಕೃಷ್ಣಾ’ ಎಂಬೊಂದು ಉದ್ಗಾರದೊಂದಿಗೇ ಪುಸ್ತಕ ತೆರೆದುಕೊಳ್ಳುತ್ತದೆ. ಹಾಗೆಯೇ
ಸಂದಿಗ್ಧ ಎಂಬೊಂದು ಕವನದಲ್ಲಿ ಮತ್ತೊಮ್ಮೆ ಕೃಷ್ಣನನ್ನು ನೆನೆಯುತ್ತಾಳೆ ರಾಧೆಯಂತೆ! ಆಗ
ಹೀಗನ್ನಿಸಿತು:
ಬದುಕನ್ನೂ ಸಾವನ್ನೂ
ಕೊಳಲನ್ನೂ ರಾಧೆಯನ್ನೂ
ಬಿಡಲಾರದ ಕೃಷ್ಣ
ಸಾವಿರಾರು ವರ್ಷಗಳಿಂದ
ಕೋಟ್ಯಂತರ ಹೃದಯಗಳನ್ನು
ತಡಕಾಡುತ್ತಲೇ
ಕಾಡುತ್ತಿದ್ದಾನೆ
ಇಷ್ಟೆ
ನನ್ನಿಂದ ಇಡೀ ಪುಸ್ತಕದ
ಬಗ್ಗೆ ಬರೆಯಲಾದದ್ದು ಇಷ್ಟೆ
ಇನ್ನೂ ನನ್ನಲ್ಲಿ
ವಿಮರ್ಶೆ ಬರೆಯುವಷ್ಟು ಅಹಂಕಾರ ಉಳಿದಿಲ್ಲ! ಪ್ರತಿಕಾವ್ಯವನ್ನು ಸೃಷ್ಟಿಸಬಲ್ಲ ಸ್ಪೂರ್ತಿಯ
ಕಾವ್ಯಾನುಭವ ಪಡೆದಿದ್ದೇ “ಮೊದಲ ಕನಸು” ಸಂಕಲನದ “ಓದುವ ಆಟ”ದ ಸಾರಾಂಶ.
ಕವಯಿತ್ರಿ: ಚಂದ್ರಾವತಿ
ಪ್ರಕಾಶಕರು: ಚಂದನ
ಪ್ರಕಾಶನ, ಬದ್ರಿಯಾ ನಗರ ಮಂಗಳೂರು-೫೭೪೧೨೯
ನಿಮ್ಮಲ್ಲಿ ಹೊಸ ಕಾವ್ಯವನ್ನು ಮೂಡಿಸಲು ಸಫಲವಾಗಿರುವದೇ, ಆ ಕೃತಿಯ ಹೆಚ್ಚುಗಾರಿಕೆಯನ್ನು ತೋರಿಸುವುದು!
ReplyDelete“ಮೊದಲ ಕನಸು” ಸಂಕಲನವನ್ನು ವಿಮರ್ಷಿಸುತ್ತಾ ತಾವು ಬರೆದ ತೌಲಾನಾತ್ಮಕ ಚರಣಗಳು ಆವೇ ಉತ್ತಮ ಕಾವ್ಯದಂತಿವೆ. ಒಳ್ಳೆಯ ಬ್ಲಾಗಿಗೆ ಬಂದ ಅನುಭವವಾಯಿತು.
ReplyDelete