ಬದುಕು ಹೊಸದಾದ ಕತೆ
ರಾತ್ರಿ ಪಾಳಿಯ ಇಬ್ಬರು ಕೆಲಸಗಾರರನ್ನು ಹೊತ್ತುಕೊಂಡು ಬಂದ ಗಾಡಿಗೆ ತಲೆ ಬಾಚದಿದ್ದರೂ ಸ್ನಾನ ಮಾಡಿದ ನೆಮ್ಮದಿಯಿಂದ ಹತ್ತಿ ಡ್ರೈವರ್ ಪಕ್ಕ ಕುಳಿತೆ. ಅವರನ್ನೆಲ್ಲ ಗೂಡು ಸೇರಿಸಿ ಹಗಲಿನವರನ್ನು ಕರೆದುಕೊಂಡು ಸೈಟ್ ಸೇರುವ ತರಾತುರಿಯಲ್ಲಿತ್ತು ಗಾಡಿ.
ಹೀಗೆ ಎಪ್ಪತ್ತು ಎಂಭತ್ತರ ಸ್ಪೀಡಿನಲ್ಲಿ ಸಾಗುವಾಗ ತಣ್ಣಗೆ ಮಳೆ ಹನಿಯುತ್ತಿತ್ತು. ಸಿಡಿ ಯಲ್ಲಿ ಹೊಸದಾಗಿ ಜಾಕಿ ಹಾಡು
....ಎಕ್ಕ ರಾಜ ರಾಣಿ ನನ್ನಕೈ ಒಳಗೆ....
ಇನ್ನೂ ಮುಂದಿನ ಸಾಲು ಬಂದಿಲ್ಲ ಅದಾಗಲೇ ಅಡ್ಡರಸ್ತೆಯಿಂದೊಂದು ನಮ್ಮಷ್ಟೇ ದೊಡ್ಡ ವಾಹನ ಫುಲ್ ಲೋಡಾಗಿ ನಮ್ಮಗಿಂತ ಸ್ಪೀಡಿನಲ್ಲಿ ವಕ್ಕರಿಸಿದ್ದ. ನಮ್ಮ ಸ್ಪೀಡಿಗೆ ಬ್ರೇಕ್ ಹಾಕಿದ್ದರೂ ಢಿಕ್ಕಿ ಗ್ಯಾರೆಂಟಿ, ಎಡದಿಕ್ಕಿನಿಂದ ನುಗ್ಗಿದರೂ ಅದೇ ಕಥೆ. ಬಾಕಿ ಬಿದ್ದಿದ್ದು ಬಲಬದಿ....ನುಗ್ಗಿಸುವ ಪ್ರಯತ್ನದಲ್ಲಿ ಚಾಲಕನ ನಿಯಂತ್ರಣ ತಪ್ಪುತ್ತಿರುವುದು ತಿಳಿದಂತೆ ಎಲ್ಲದಕ್ಕೂ ಸಿದ್ಧನಾಗಿ ಕಣ್ಮುಚ್ಚಿದೆ.
ನಕ್ಷತ್ರ ಲೋಕ ಕಂಡಂತಾದ ಹೊತ್ತಿಗೇ ತೂಗುಯ್ಯಲೆಯಲ್ಲಿ ತೇಲಿದ ಅನುಭವ. ಎಡಭುಜವನ್ನೂರಿ ಹಾಸಿಗೆಯ ಮೇಲೆ ಬಿದ್ದಂತಾಗುವಾಗಲೇ ಯಾರೋ ಮುಖಕ್ಕೆ ನೀರು ಸಿಂಪಡಿಸಿದಂತಾಗಿ ಕಣ್ತೆರೆದೆ. ಗಾಡಿಯ ಕೆಳಭಾಗದಲ್ಲಿ ಸಣ್ಣ ಹೊಗೆ ಕಂಡಂತಾಗಿ ಸಿನೆಮಾಗಳಲ್ಲಿ ನೋಡಿದ ಇಂಜಿನ್ ಸ್ಪೋಟದ ನೆನೆಪಾಗಿ ಓಟಕ್ಕಿತ್ತೆ...ನುಗ್ಗಿದ್ದು ಅಲ್ಲೊಂದು ಹೋಟೆಲ್ ಒಳಗೆ..ಅಲ್ಲೊಂದು ಕುರ್ಚಿಯ ಮೇಲೆ ಕುಳಿತ ನಂತರ ಕೈಕಾಲು ನಡುಕ ಅನುಭವಕ್ಕೆ ಬಂತು. ಯಾರೋ ಬಟ್ಟೆ ತಂದು ಕೊಟ್ಟಾಗ ಮೂಗಿನಲ್ಲಿ ರಕ್ತ ಸುರಿದಿದ್ದೂ ಗೊತ್ತಾಯಿತು.
ಈ ಸಂದರ್ಭದಲ್ಲಿ ನಾನೇ ಡ್ರೈವರ್ ಎಂದುಕೊಂಡು ನನ್ನೊಡನೆ ಜಗಳ ತೆಗೆಯಲೊಬ್ಬ ಬಂದಿದ್ದ.ಅವನ ಕೂಗಿನಿಂದ ವಾಸ್ತವಕ್ಕೆ ಬಂದ ನಾನು ಡ್ರೈವರ್ ಗಾಡಿಯೊಳಗಿದ್ದನೆಂದೂ..ಇನ್ನೂ ಜನರಿದ್ದಾರೆಂದೂ ತಿಳಿಸಿ ಎಷ್ಟು ಜನರೆಂದು ತಿಳಿಸಲು ಅಂಕೆಗಳು ಮರೆತಂತಾಗುತ್ತಿತ್ತು.
ಅಷ್ಟರಲ್ಲಿ ಮಹಾನುಭಾವನೊಬ್ಬನು ಆಸ್ಪತ್ರೆಗೆ ಹೋಗುವಂತೆ ನನ್ನನ್ನು ಪ್ರಚೋದಿಸುತ್ತಿರುವಾಗಲೇ
ಯಾರೋ ಪುಣ್ಯಾತ್ಮರು ಅವರನ್ನೆಲ್ಲಾ ಹೊರಗೆ ಕರೆತಂದಿದ್ದರು. ಯಾರಿಗೂ ಎಲ್ಲೂ ಪೆಟ್ಟಾದಂತೆ ಕಾಣುತ್ತಿರಲಿಲ್ಲ. ಸಹಜವಾಗಿ ಎಲ್ಲರೂ ಹೆದರಿದ್ದರು. ನನಗೂ ಏನಾಗಿಲ್ಲವೆಂಬ ಭ್ರಮೆಯಲ್ಲಿದ್ದಾಗಲೇ ಆ ಪುಣ್ಯಾತ್ಮ ನನ್ನ ಕೈಗಳನ್ನೊಮ್ಮೆ ನೋಡಿಕೊಳ್ಳುವಂತೆ ಹೇಳಿದ.
ಪುಡಿ ಪುಡಿಯಾದ ಗಾಜುಗಳು ಬಲಗೈ ಚರ್ಮವನ್ನು ಕಿತ್ತು ಹಾಕಿದ್ದವು. ಮೂಳೆಗಳು ಕಾಣುತ್ತಲೇ ನೋವಿನ ಅನುಭವವಾಗಿ ಆಶ್ಚರ್ಯವಾಯಿತು. ತಕ್ಷಣ ಆಫೀಸಿಗೆ ವಿಷಯ ತಿಳಿಸಿ ಎಲ್ಲರಿಗೂ ಧೈರ್ಯ ಹೇಳಿ ತಯಾರಿದ್ದ ಆಟೋ ಹತ್ತಿ ಆಸ್ಪತ್ರೆ ಸೇರಿದೆವು.
ಕೈಯಿಗೆ ಅರೆವಳಿಕೆ ಚುಚ್ಚುವಾಗ, ಕರಕರವೆಂದು ಚರ್ಮ ಹೊಲಿಯುವಾಗ ಪರೀಕ್ಷೆಗಳಲ್ಲಿ ನೆನಪಾಗದೇ ಉಳಿದಿದ್ದ ಫಾರ್ಮುಲ ಡಿರೈವೇಶನ್ಗಳು , ಮರೆತು ಹೋಗಿದ್ದ ವೇದಮಂತ್ರಗಳು, ಹೀಗೆ ಏನೆಲ್ಲ ನೆನಪಾಗಿ ಗೊಂದಲಕ್ಕೆ ತಂದೊಡ್ಡಿದವು.
ಅಂಗಿ ಹರಿದು ಹೋಯಿತೆಂದು ಶುರುಮಾಡಿ ಅಮ್ಮನಿಗೆ ನಿಧಾನವಾಗಿ ಹೇಳಿ ಮುಗಿಸಿ ಹದಿನೈದು ದಿನ ಬಲಕೈಯನ್ನು ನಿಷ್ಕಲ್ಮಶವಾಗಿ ಪ್ರೀತಿಸುತ್ತಾ ಬದುಕಿಬಂದ ನಂತರ ಇದೀಗ ಈ ಬದುಕು, ದೇವರು, ಮನುಷ್ಯ ವರ್ತನೆ, ಋಣಾನುಬಂಧದ ಕಲ್ಪನೆ,ಕರ್ಮಸಿದ್ಧಾಂತದ ಹೊಳಹುಗಳೆಲ್ಲ ಹೊಸದಾಗಿ ಕಾಣಿಸಿ ಬದುಕು ಹೊಸದಾಗಿದೆ.
ಅಂತೂ ದೊಡ್ಡ ಸಾಹಸವನ್ನೇ ಮಾಡಿದಿರಿ ಅನ್ನಿ..
ReplyDeleteಅಷ್ಟೊಂದು ರೌದ್ರ ಘಟನೆಯನ್ನ ಇಷ್ಟೊಂದು ಹಾಸ್ಯಮಯವಾಗಿ ನಿರೂಪಿಸಿದೀರಿ.. ಬೇಜಾರಾಗ್ಬೇಕೋ ನಂಗ್ಬೇಕೋ ಎರಡರ confusuion ಮಧ್ಯೆ ನಂದು confusious ಅವತಾರ ಅಷ್ಟೇ.. ಒಳ್ಳೆಯ ಬರಹ ನೂತನ್ ಜೀ. :) :)
ಭಯಾನಕ ಘಟನೆಯನ್ನು ತುಂಬ ನಿಯಂತ್ರಿತ ಶೈಲಿಯಲ್ಲಿ ಚಿತ್ರಿಸಿದ್ದೀರಿ. ಇದು ಒಳ್ಳೆಯ ಬರವಣಿಗೆ.
ReplyDeleteಬೇಂದ್ರೆ ಕಾವ್ಯವನ್ನು ಎಳೆ ಎಳೆಯಾಗಿ ಅರಳಿಸಿಕೊಡುತ್ತಿರುವ ಸಲ್ಲಾಪದ ಸುನಾಥರಿಗೆ ನಾವು ಅಭಾರಿಯಾಗಿದ್ದೇವೆ. ಧನ್ಯವಾದಗಳು.. ನಮಸ್ಕಾರಗಳು.
ReplyDeleteಸತೀಶ.. ನಿಂಗೂ ಥ್ಯಾಂಕ್ಸ್ ಕಣೋ. ಬೇಜಾರಾಗೋವಂಥದ್ದು ಏನೂ ನಡೆದಿಲ್ಲವಾದ್ದರಿಂದ ಜಸ್ಟ್ ಎಂಜಾಯ್ ಮಾಡೋಣ.. ದೇವರಿಗೊಂದು ಥ್ಯಂಕ್ಸ್ ಹೇಳಿ ಡ್ರಾಮಾ ಮಾಡಾಣ :)